ನರೇಶ್ ಕುಮಾರ್
22-12-1928. ಭಾರತದ ವಿಖ್ಯಾತ ಟೆನ್ನಿಸ್ ಆಟಗಾರ. ಅರ್ಜುನ ಪ್ರಶಸ್ತಿ ವಿಜೇತ. ಟೆನ್ನಿಸ್ ಕಾಮೆಂಟೇಟರ್. ಕ್ರೀಡಾ ಬರಹಗಾರ. ವಾಣಿಜ್ಯೋದ್ಯಮಿ. ಬಿ.ಕಾಂ. ಪದವೀಧರ. ಅತ್ಯಂತ ಹುರುಪಿನ ಟೆನ್ನಿಸ್ ಆಟವಾಡುತ್ತಿದ್ದ ಈತ 1945 ಮತ್ತು 46ರಲ್ಲಿ ರಾಷ್ಟ್ರೀಯ ಜ್ಯೂನಿಯರ್ ಟೆನ್ನಿಸ್ ಚಾಂಪಿಯನ್‍ಷಿಪ್ಪನ್ನು ಸತತವಾಗಿ ಗೆದ್ದುಕೊಂಡ. 1951-52ರಲ್ಲಿ ಭಾರತದ ಪ್ರಥಮ ಟೆನ್ನಿಸ್ ಆಟಗಾರನಾಗಿ ಪರಿಗಣಿತನಾದ. ಹಲವಾರು ಚಾಂಪಿಯನ್‍ಷಿಪ್‍ಗಳನ್ನು ಗೆದ್ದುಕೊಂಡಿರುವ ಈತ ಡೇವಿಸ್ ಕಪ್‍ನ ಭಾರತದ ಟೀಮಿನಲ್ಲಿ 1955ರಿಂದ 60ರವರೆಗೆ ಒಬ್ಬ ಸದಸ್ಯನಾಗಿದ್ದ. 1955-56 ಹಾಗೂ 1958-59ರಲ್ಲಿ ಭಾರತದ ದ್ವಿತೀಯ ಅಗ್ರಸ್ಥಾನ ಪಡೆದಿದ್ದ. ಟೆನಿಸ್ ಕಾಶಿ ಎನಿಸಿದ್ದ ವಿಶ್ವಪ್ರಸಿದ್ಧ ವಿಂಬಲ್ಡನ್ನಿನಲ್ಲಿಯೂ ಈತ ಆಡಿದ್ದಾನೆ. ಜರ್ಮನಿಯ ಮಿಸ್ ಇ ಬಡಿಂಗಳ ಜೊತೆಗೂಡಿ 1957ರಲ್ಲಿ ವಿಂಬಲ್ಡನ್ ಮಿಕ್ಸೆಡ್ ಡಬಲ್ಸ್ ಆಟದಲ್ಲಿ ಕ್ವಾರ್ಟರ್ ಫೈನಲ್ಸ್‍ವರೆಗೆ ಹೋಗಿದ್ದ. 1958ರಲ್ಲಿ ಕೃಷ್ಣನ್ ಜೊತೆಗೂಡಿ ವಿಂಬಲ್ಡನ್ ಪುರುಷರ ಡಬಲ್ಸ್ ಆಟದಲ್ಲಿ ಕ್ವಾರ್ಟರ್ಸ್ ಫೈನಲ್ಸ್‍ವರೆಗೆ ಹೋಗಿದ್ದ. ಆಸ್ಟ್ರಿಯದ ಹ್ಯೂಬರ್ ಜೊತೆಗೂಡಿ 1957ರಲ್ಲಿ ಮಾಸ್ಕೊದಲ್ಲಿ ಡಬಲ್ ಚಾಂಪಿಯನ್‍ಷಿಪ್ ಗಳಿಸಿದ. 1962-63 ಹಾಗೂ 1963-64ರಲ್ಲಿ ಕೃಷ್ಣನ್-ನರೇಶ್‍ಕುಮಾರ್ ಜೋಡಿಯಾಟ ಏಷ್ಯನ್ ಡಬಲ್ಸ್ ಚಾಂಪಿಯನ್‍ಷಿಪ್ ಗಳಿಸಿತು. ಇಂದು ಕಲ್ಕತ್ತದ ನಿವಾಸಿಯಾಗಿರುವ ಈತ ಟೆನ್ನಿಸ್ ಆಟದ ಬಗ್ಗೆ ಆಕಾಶವಾಣಿ ಹಾಗೂ ಇತರೆಡೆಗಳಲ್ಲಿ ವೀಕ್ಷಕ ವಿವರಣೆ ಒದಗಿಸುತ್ತಿದ್ದಾನೆ. ಪತ್ರಿಕೆಗಳ ಕ್ರೀಡಾಪುಟಗಳಿಗೆ ಬರೆಯುತ್ತಿದ್ದಾನೆ. ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಪ್ರಮುಖ ಹೆಸರಾಗಿರುವ ಈತನ ಪ್ರತಿಭೆ ಹಾಗೂ ಸಾಧನೆಗಳನ್ನು ಗುರುತಿಸಿ ಭಾರತ ಸರ್ಕಾರ 1962ರಲ್ಲಿ ಈತನಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿತು.
(ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ